ಸಂಸ್ಕೃತ ಶ್ಲೋಕಗಳ ಕಾವ್ಯ ರೂಪದ ತರ್ಜುಮೆ ನಮ್ಮೆಲ್ಲರ ಹವ್ಯಾಸ. ಇದು ಕೇವಲ ಟೈಮ್ ಪಾಸಿಗೆ ಮಾತ್ರ, ಇದನ್ನೆಲ್ಲಾದರೂ ಉಲ್ಲೇಖಿಸೀರಾ ಮತ್ತೆ !
ಭಗವದ್ಗೀತೆಯಲ್ಲಿರುವ ನೂರಾರು ಅಣಿಮುತ್ತುಗಳಲ್ಲಿ ಒಂದನ್ನು ಆರಿಸಿ ತರ್ಜುಮೆ ಮಾಡಲು ಪ್ರಯತ್ನಿಸಿದ್ದೇವೆ.
ಮೂಲ ಶ್ಲೋಕ:
ಆಪೂರ್ಯಮಾಣಮಚಲಪ್ರತಿಷ್ಠಮ್
ಸಮುದ್ರಮಾಪಃ ಪ್ರವಿಶಂತಿ ಯದ್ವತ್ |
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ನೋತಿ ನ ಕಾಮಕಾಮೀ ||
ಅರುಣ:
ಕಡಲ ಒಡಲಿಗೆಷ್ಟೋ ನೀರು
ನದಿಯೋ, ಮಳೆಯೋ, ತೊರೆಯೋ, ಹೊಳೆಯೋ
ನಿತ್ಯಶಾಂತವು ಸಾಗರ
ಬಯಕೆ ಹರಿದು ತಾನೆ ಬರಲು
ನದಿಯಾಗಿ ಮಳೆಯಾಗಿ ತೊರೆಯಾಗಿ ಹೊಳೆಯಾಗಿ
ಬಾಳು ಶಾಂತಿಯ ಆಗರ
ಬಯಕೆ ಬೆನ್ನನೇರಿ ಹೊರಟರೆ
ಬದುಕು ಕಠಿನ ನಾಗರ !
ಶ್ರೀಕಾಂತ್:
ಕುಣಿವುದೇನಾರ್ಭಟದಿ ಜಲಸೇರಲದಕಬ್ಧಿ ?
ತುಂಬಿಯೂ ತುಳುಕದದು ಹೆಚ್ಚು ಜಲವಿಹುದೆಂದು !
ಅಂತೆಯೇ ಬಯಕೆಗಳು ಮನಕೆ ಸೇರಲು ಆತ
ತೃಪ್ತನವ, ಬಯಕೆಗಳ ಹಿಂಬಾಲಿಸುವಲ್ಲ !
ಲಕ್ಷ್ಮೀ:
ಮಹಾನದಿಯ ಮಿಲನದಲಿ ಹಿಗ್ಗುವುದೇನು ಸಾಗರ ?
ಕಡೆಗಣಿಪುದೇನಬ್ಧಿ ಕೂಡೆ ಕಿರುತೊರೆಗಳು ಸಾವಿರ ?
ನದಿಹರಿವು ಕಡಿಮೆಯಾಗೆ ತಾ ಹೂಡುವುದೇ ಸಮರ ?
ಏನಾಗಲಿ ಬಿಡಲಿ ಅದು ಶಾಂತ, ಸಮೃದ್ಧ, ಸ್ಥಿರ.
ಅಂತೆಯೇ ಆಸೆ ಕೈಗೂಡೆ ಹಿಗ್ಗುವುದು ವ್ಯರ್ಥ
ಕೈಗೂಡದಿರೆ ಕುಂದುವುದರಿಂ ಅನರ್ಥ
ಬೆನ್ನಟ್ಟಿ ಆಸೆಯ ಶಾಂತಿ ಕಳೆದುಕೊಳುವುದಕಿಂತ
ತಾನಾಗಿ ಒಲಿದರೆ ಜೀವನವದು ಸಾರ್ಥ
ಶ್ಲೋಕ :
ಛಿನ್ನೋಪಿ ಚಂದನತರುಃ ನ ಜಹಾತಿ ಗಂಧಂ
ವೃದ್ಧೋಪಿ ವಾಪಣಪತಿಃ ನ ಜಹಾತಿ ಲಾಭಂ |
ಯಂತ್ರಾರ್ಪಿತೋ ಮಧುರತಾಂ ನ ಜಹಾತಿ ಚೇಕ್ಷುಃ
ಕ್ಷೀಣೋಪಿ ನ ತ್ಯಜತಿ ಶೀಲಗುಣಾನ್ ಕುಲೀನಃ ||
ತರ್ಜುಮೆಗಳು ಇಂತಿವೆ :
ಶ್ರೀನಿವಾಸ:
ಭಿನ್ನಿಸಿದೊಡಂ ಬಿಡದು ಗಂಧ ತಾಂ ಪರಿಮಳವ
ವಣಿಕ ತಾಂ ಮುಪ್ಪಿನೊಳಗಮಂ ಲಾಭ ಬಿಡನೊ !
ತನ್ನೊಡಲ ಯಂತ್ರಹಿಂಡಲು ಕಬ್ಬು ಸಿಹಿಯಹುದು
ತಾನಳೆದರೂ ಬಿಡ ಕುಲೀನ ತಾಂ ಗುಣವ .
ಅರುಣ:
ಕುಲವಂತನು ತೆರದಿ ಇಕ್ಷುವು
ಸುಲಿದಂತೆ ಯಂತ್ರದಿ ತಾ ಸವಿ ಭಕ್ಷ್ಯವು
ಸಮವವನು ಸಿರಿ ಗಂಧಕೆ
ತೇಯ್ದಂತೆ ಪಸರಿಸುವುದು ಜಗಕೆ
ಬಗೆ ಎಂತು ಬಣ್ಣಿಸುವುದು ?
ವಣಿಕ ತಾನಾದರೂ ಮುದಿಯು
ಗಳಿಕೆಯು ತನ್ನೊಡಲ ಬಿದಿಯು
ಅಂತೆ ಕುಲವಂತನು
ಎಂತು ಬಲವಂತನು
ನಶಿಸದವನ ಗುಣವು
ಶ್ರೀಕಾಂತ :
ಚಂದನವು ಚೂರಾದರೂ ಗಂಧಕೇನು ?
ಬಂದಾ ಎಣಿಸುವ ವಣಿಕ, ಮುಪ್ಪಾದರೇನು ?
ಯಂತ್ರದಲಿ ಜಜ್ಜಿದರೆ ಕಬ್ಬ ಸಿಹಿಗೇನು ?
ಚೆಂದ ಸುಜನರ ಗುಣವು, ಏನಾದರೇನು ?
ಲಕ್ಷ್ಮೀ :
ಕಡಿದು ಕಡ್ಡಿಯಾದರೂ ಗಂಧ ಸುಗಂಧವ ಬಿಡದು
ವೃದ್ಧನಾದರೂ ವಣಿಕನಿಗೆ ಲಾಭದಾಸೆ ತೀರದು
ಯಂತ್ರಕ್ಕೆ ಸಿಲುಕಿಯೂ ಕಬ್ಬು ಕಹಿ ತಾನಾಗದು
ಕ್ಷೀಣನಾದರೂ ಸತ್ಪುರುಷನ ಸದ್ಗುಣವು ತಾನಳಿಯದು.
ಇತ್ತೀಚೆಗೆ ನಮ್ಮಲ್ಲಿ ಹೊಸ ಹವ್ಯಾಸವೊಂದು ಹುಟ್ಟಿಕೊಂಡಿದೆ - ಸಂಸ್ಕೃತ ಶ್ಲೋಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು; ಅದೂ ಕವಿತೆಯ ರೂಪದಲ್ಲಿ.
ನೆನ್ನೆ ಅರುಣ ಒಂದು ಶ್ಲೋಕ ಕಳುಹಿಸಿದ್ದ.
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ
ಏವಂ ತ್ವಯಿ ನಾನ್ಯಥೇತೋಸ್ತಿ
ನ ಕರ್ಮ ಲಿಪ್ಯತೇ ನರೇ
ಈಶಾವಾಸ್ಯೋಪನಿಷತ್ತಿನ ಪ್ರಸಿದ್ಧವಾದ ಶ್ಲೋಕವಿದು. ಇದರ ನಾಲ್ಕು ತರ್ಜುಮೆಗಳು ಕೆಳಗಿವೆ
ಶ್ರೀನಿವಾಸ:
ಕರ್ಮಗಳನಾಚರಿಪುದಿಂದಲೇ ಇಹದೊಳಗೆ
ನೂರ್ಕಾಲ ಜೀವಿಸುವ ಹಂಬಲವು ಬಹುದು
ಬೇರಿಲ್ಲವಾವ ಹಿತ ಮಾರ್ಗವೀ ಮಾರ್ಗದಲಿ
ಕರುಮವಂಟದು ನರನ - ಶ್ರೀನಿವಾಸ
ಅರುಣ:
ನೀನು ಮಾಳ್ಪ ಹಲವು ಕರ್ಮ
ಅದುವೆ ನಿನಗೆ ಬದುಕ ಧರ್ಮ
ಬಯಸು ಬಾಳೆ ವರ್ಷ ನೂರು
ತೀರಿಸಲ್ಕೆ ಇಹವೆ ಸೂರು
ಕೇಡು ವೃಕ್ಷ ಬೆಳೆಸಿದಾಗ
ಬಾಳ ನೆಲದಿ ತನ್ನ ಬೇರು
ಶ್ರೀಕಾಂತ:
ಇರುವ ನಿನ್ನಯ ಹೊಣೆಯ ಹೊತ್ತು
ಇರಲು ಇಚ್ಛಿಸು ನೂರು ವರುಷ
ಬಿರಿದು ಈ ನಿಷ್ಠೆಯನು ಬದುಕಲು
ಬರುವುದಪಕೃತಿಕೀರ್ತಿ ನರಗೆ
ಲಕ್ಷ್ಮೀ:
ಇಹದಲ್ಲಿ ಹೊಂದಲು ಅತಿಶಯದ ಹರುಷ
ಇರುವ ಕೆಲಸ ಮಾಡುತ್ತ ಬಾಳಲಿಚ್ಛಿಸು ನೂರ್ವರ್ಷ
ಇಲ್ಲ ಕರ್ಮ ಸವೆಸಲು ಅನ್ಯ ಸುಲಭಾದರ್ಶ
ಕರ್ಮವಂಟದು ಜೀವಕ್ಕೆ ಹೀಗಿರಲು ಪುರುಷ
ಒಂದೇ ಶ್ಲೋಕ. ನಾಲ್ಕು ದೃಷ್ಟಿಕೋನಗಳು! ನಾನು ಎಲ್ಲರೂ 'ಕರ್ಮ' ಎಂಬ ಪದಕ್ಕೆ ಏನೆಂದು ಅನುವಾದಿಸುತ್ತಾರೆ ಎಂದು ಕುತೂಹಲದಿಂದ ಕಾದಿದ್ದೆ. ಲಕ್ಷ್ಮೀ 'ಕೆಲಸ' ಎಂದರೆ ನಾನು 'ಹೊಣೆ' ಎಂದೆ. ಅರುಣ ಮತ್ತು ಶ್ರೀನಿವಾಸ ಕರ್ಮವನ್ನು ಕರ್ಮವಾಗಿಯೇ ಉಳಿಸಿದರು.
ಈ ಎಸ್ಸೆಮ್ಮೆಸ್ಸಲ್ಲಿ ಕಗ್ಗ ಶ್ಲೋಕ ಇವನ್ನೆಲ್ಲಾ ಕಳಿಸುವ ಹವ್ಯಾಸ ಎಂಥಾ ಸೊಗಸು!!
ಹೊಸ ಹವ್ಯಾಸವೆಂದರೆ ಯಾವುದಾದರೊಂದು ಶ್ಲೋಕವನ್ನು ಕನ್ನಡದಲ್ಲಿ ಬರೆಯುವುದು. ಮನಸ್ಸಿಗೆ ಒಳ್ಳೆಯ ಮುದ ನೀಡುತ್ತೆ ಈ ಹವ್ಯಾಸ. ಶ್ರೀನಿವಾಸನ ಈ ಅಂಕಣದಿಂದ ಆರಂಭವಾಗಿದ್ದು ಇದು. ಒಂದು ಬಗೆಯ ರಚನಾತ್ಮಕ ಸ್ಪರ್ಧೆಯೂ ಇತ್ತೆಂದರೆ ತಪ್ಪಾಗಲಾರದು. ವೆರಿ ಗುಡ್.
ಮೂಕಂ ಕರೋತಿ ವಾಚಾಲಂ
ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ
ಪರಮಾನಂದ ಮಾಧವಂ ||
ಶ್ರೀಕಾಂತ, ಶ್ರೀನಿವಾಸ, ಲಕುಮಿ ಎಲ್ಲರೂ ಸಕ್ಕದವನ್ನು ಓದಿ, ಓದಿಸುವುದರಲ್ಲಿ ಎತ್ತಿದ ಕೈ. ಶ್ರೀಕಾಂತನಂತೂ ಅಕ್ಷರಕ್ಷರ ಬಿಡಿಸಿ ಹೇಳುವುದರಲ್ಲಿ ನಿಸ್ಸೀಮ. ಲಕುಮಿಗೆ ಕೊಂಚ ಸಂಕೋಚವಾದರೂ ತಿಳಿವಳಿಕೆಗೇನೂ ಕಮ್ಮಿಯಿಲ್ಲ. ಶ್ರೀನಿವಾಸನ ಬಗೆಯನ್ನು ಬಣ್ಣಿಸಲೇ ಬೇಕಿಲ್ಲ.
ಈ ಎಸ್ಸೆಮ್ಮೆಸ್ಸು ಗೆಳೆಯರ ಮೊಬೈಲನ್ನು ಹೊಕ್ಕಿದ್ದೇ ತಡ ಸ್ಮಿತೆಯಿಂದ ಮರುಸಂದೇಶ ಬಂದೇ ಬಿಟ್ಟಿತು. ನಾನು ಅರ್ಥವನ್ನು ನಿರೀಕ್ಷಿಸುತ್ತಿದ್ದೆ. ಆದರೆ ಸ್ಮಿತೆಯ ಸಂದೇಶ ಸೊಗಸಾಗಿತ್ತು.
ಹಾಂ ಬ್ರೀಂ ಠುಸ್
ನಿಂಗೆ ಟೈಮ್ ಪಾಸ್ ಆಗ್ತಿಲ್ಲ ಅನ್ಸತ್ತೆ
ಅದಕ್ಕೆ ತಲೇಗ್ ಬಂದಿದ್ದೆಲ್ಲಾ ಕಳಿಸ್ತಿದ್ದೀಯ.
ಒಳ್ಳೇ ಸ್ಮಿತೆ.
ಶ್ರೀಕಾಂತನ ವ್ಯಾಖ್ಯಾನ ಯಾವಾಗಲೂ ಎಲ್ಲರಿಗಿಂತಲೂ ಭಿನ್ನವಾಗಿರುತ್ತೆ. ತರ್ಕಬದ್ಧವಾಗಿಯೂ ಕೂಡ ಇರುತ್ತೆ.
ಯಾರ ಕೃಪೆಯು ಮೂಕನನ್ನು ವಾಕ್ಪಟುವಾಗಿಸಬಲ್ಲದೋ
ಕಾಲಿಲ್ಲದವನನ್ನು ಬೆಟ್ಟ ಹಾರುವಂತೆ ಮಾಡಬಲ್ಲದೋ
ಆ ಪರಮಾನಂದವೇ ಆಗಿರುವ ಮಾಧವನಿಗೆ ನಮಸ್ಕರಿಸುತ್ತೇನೆ.
ಪದ್ಯರೂಪದಲ್ಲಿ ಬರೆಯಲು ತಯಾರಿರಲಿಲ್ಲ ಶ್ರೀಕಾಂತ. ಯಾಕೆ ತರ್ಕಬದ್ಧವಾಗಿಯೂ ಇರುತ್ತೆ ಎಂದು ನಾನು ಹೇಳಿದೆನೆಂದರೆ, ಇನ್ನೊಂದು ವ್ಯಾಖ್ಯಾನ ಕೊಟ್ಟ. ಸಮಾಸವನ್ನು ಜೋಡಿಸಿದರೆ ಹೀಗಾಗುತ್ತೆಂದ.
ಯಾರ ವಾಕ್ಪಟುತ್ವವು ಕೇಳುಗರನ್ನು ಮೂಕರಾಗಿಸುತ್ತದೋ
ಯಾರು ಬೆಟ್ಟವನ್ನು ಹಾರಿಕೊಂಡೇ ದಾಟಿಸಬಲ್ಲರೋ
ಯಾರು ಮಾಧವನಿಗೆ ಪರಮಾನಂದವೇ ಆಗಿರುವನೋ
ಅಂಥಾ ದಯಾಮೂರ್ತಿಗೆ (ಹನುಮಂತನಿಗೆ) ನಮಸ್ಕರಿಸುತ್ತೇನೆ.
ಇದರ ಬಗ್ಗೆ ಬಹುಶಃ ಲಕುಮಿ ಮತ್ತು ಶ್ರೀನಿವಾಸನ ವಿವರಣೆಯಿರುತ್ತೆಂದುಕೊಂಡಿದ್ದೇನೆ.
ಲಕುಮಿಯಂತೂ ಹಳೆಗನ್ನಡದ ಕವಿತೆಯ ಶೈಲಿಯನ್ನು ಚೆನ್ನಾಗಿ ಅನುಸರಿಸಿದ್ದಾಳೆ.
ಮೆಲುನಗೆಯಿಂ ಮೂಕನಂ ವಾಗ್ಮಿಯಾಗಿಪನ
ಕರುಣದಿಂ ಕುಂಟನಂ ಬೆಟ್ಟ ದಾಂಟಿಪನ
ಪಾಪನಾಶನ, ಪರಮನಂದನನ
ವಂದಿಪೆ ನಾ ಆ ಮಾಧವನ.
ಶ್ರೀನಿವಾಸನು ನನಗೆ ಬರೆಯಲು ಹೇಳಿ, ಬರೆಯದಿದ್ದರೆ ಈ ಬಾರಿ ಪತ್ರಿಕೆಯ obituary columnನಲ್ಲಿ ನನ್ನ ಹೆಸರು ಬರುತ್ತೆಂದು ಹೇಳಿ, ಈ ಸೌಂದರ್ಯವನ್ನು ನನ್ನ ಮೊಬೈಲಿಗೆ ಕಳಿಸಿದ:
ಆವಾತನ ಕರುಣೆಯಲಿ ಮೂಗನರುಪುವನೋ
ಆವಾತನೊಲುಮೆಯಲಿ ಕುಂಟ ನಡೆಯುವನೋ
ಆ ವಾಗತೀತ ಕೃಪೆಯುಳ್ಳ ಮಾಧವನಿಗೆ
ನಾ ವಂದಿಸುವೆ ನಯದಿ - ಗಂಡಭೇರುಂಡ.
ಇನ್ನು ನನ್ನ ಸರದಿ. ಬರೆಯದಿದ್ದರೆ ಪತ್ರಿಕೆಯಲ್ಲಿ ಫೋಟೋ. ಭೀತಿಯಿಂದಲೇ ಇರುವಾಗ ಹ್ಯಾತ್‍ವೇ ವರ ಬೇರೆ ಕೊಡಬೇಕೆ, ಕರ್ಮಕಾಂಡ!! ಆದರೂ ಅರೆರಾತ್ರಿ ಸರಿ ಹೋದಮೇಲೆ ಟೈಪಿಸಿಯೇ ಬಿಟ್ಟೆ, ಈ ಸಾಲುಗಳನ್ನು. ಬರೀ ಗಂಭೀರ ಸಾಲುಗಳನ್ನೇ ನೋಡಿ ನೋಡಿ ನನಗೂ ತರಲೆಯ ಅಗತ್ಯವಿದೆಯೆನಿಸಿತು. ಮಾಧವನ ಕ್ಷಮೆಯಿರುತ್ತೆ.
ನೀ bless-ಇಸಲು ಮಾಧವನೇ
ಒಟಗುಟ್ಟುವನು dumb-ಉ
trek-ಇಸುವನು lame-ಉ
ಓ great-ಅನೇ,
ಜೋಡಿಸಿ ನನ್ನ ಬೆರಳುಗಳು five-ಉ
ನಿನಗೆ ಹೊಡೆಯುವೆನು ಮನಸಾರೆ dive-ಉ!
-ಅ
14.05.2008
11.45PM
(ಈ ಲೇಖನ http://parisarapremi.blogspot.com/2008/05/blog-post_14.html ನಲ್ಲಿ ಪ್ರಕಟವಾಗಿತ್ತು)
ಇಂದು ಮಧ್ಯಾಹ್ನ ನನ್ನ-ಅರುಣನ ನಡುವೆ ನಡೆದ ಸ್ವಾರಸ್ಯಕರ ಎಸ್.ಎಂ.ಎಸ್ (ಮೊಬೈಲ್ ಸಂದೇಶ) ಸಂವಾದವನ್ನು ಇಲ್ಲಿ ನಿಮ್ಮ ಮುಂದಿಡುವ ಹಂಬಲ ನನಗೆ! ನೀವು ಕಾವ್ಯ ರಸಿಕರಾಗಿದ್ದರೆ ಇದನ್ನೋದಿ ನೀವೂ ನನ್ನಷ್ಟೇ ಸಂತೋಷ ಪಡುವಿರಿ ಎನ್ನುವ ನಂಬಿಕೆ ನನಗಿದೆ. ನೀವು ಕಾವ್ಯರಸಿಕರಲ್ಲದಿದ್ದರೆ ಮುಂದಕ್ಕೆ ಓದದಿರುವುದೇ ಒಳಿತು! :-)
ಶ್ರೀನಿವಾಸ::
ದೇಹಿನೋಸ್ಮಿನ್ ಯಥಾ ದೇಹೇ
ಕೌಮಾರಂ ಯೌವನಂ ಜರಾ
ತಥಾ ದೇಹಾಂತರ ಪ್ರಾಪ್ತಿಃ
ಧೀರಃ ತತ್ರ ನ ಮುಹ್ಯತಿ
ಅರುಣ::
ಕನ್ನಡದಲ್ಲಿ ಓದುವಾಸೆ
ಶ್ರೀನಿವಾಸ::
ಹೇಗೆ ಎಲ್ಲ ದೇಹಿಗಳಿಗೂ (ದೇಹ ಧರಿಸಿರುವವನಿಗೂ) ಬಾಲ್ಯ-ಯೌವನ-ಮುಪ್ಪುಗಳಲ್ಲಿ ದೇಹದ ರೂಪ ಬದಲಾಗುತ್ತೋ, ಹಾಗೇ ಈ ದೇಹ ಬಿಟ್ಟಮೇಲೆಯೂ ಸಹ ಮತ್ತೊಂದು ದೇಹ ಈ ಆತ್ಮಕ್ಕೆ ಲಭ್ಯವಾಗುತ್ತೆ. ಇದಕ್ಕಾಗಿ ಯೋಗ್ಯನಾದವನು (ಜ್ಞಾನಿ) ಚಿಂತೆ ಮಾಡೊಲ್ಲ.
ಅರುಣ::
ಸಂಸ್ಕೃತದಲ್ಲಿ ಕಾವ್ಯ ರೂಪ ಹೇಳ್ಬಿಟ್ಟು ಕನ್ನಡದಲ್ಲಿ ಗದ್ಯ ಹೇಳೋದು ಅಪರಾಧ!
ಶ್ರೀನಿವಾಸ::
ದೇಹವುಳ್ಳಾತನಿಗೆ ರೂಪಗಳು ಹಲವಾರು
ಬಾಲ್ಯ-ತಾರುಣ್ಯ-ವೃದ್ಧಾಪ್ಯದೊಳಮಂತು
ಆತ್ಮಕ್ಕೆ ವಿಹಿತವಹುದನ್ಯ ದೇಹ ಪ್ರಾಪ್ತಿ
ಹಳಿಯರಿದನರಿದರೆಲೊ ಮುದ್ದುಗುಮ್ಮ
ಅರುಣ::
ಆಹ್! ಸಕ್ಕತ್.. ಇರು, ನಾನೂ ಬರೀತೀನಿ
(೧೦ ನಿಮಿಷಗಳ ನಂತರ)
ಚಿಂತಿಸದಿರು ನೀನ್ ಕಾಯದಾ ಸೊಗವನರಸಿ;
ಬೆಳೆದಂತೆ ಬಾಲ್ಯದಿಂ ಮುಪ್ಪಿಗೆ
ಆತ್ಮವು ತಾನ್ ಬೆಳೆಯುವುದು ಹೊಸಕಾಯದ ಮೊಗವನರಸಿ
ತಿಳಿ, ಇದೇ ಸೃಷ್ಟಿ ನಿಯಮದೊಪ್ಪಿಗೆ!
ನಡೆವುದಷ್ಟೆ ನಿನ್ನ ಕೆಲಸವು, ತೆಪ್ಪಗೆ!!
ಶ್ರೀನಿವಾಸ::
ಆಹ್! ಸಕ್ಕತ್.. ಸೂಪರ್ ಸಿಕ್ಕಾಪಟ್ಟೆ ಸೂಪರಾಗಿದೆ ಮ್ಯಾನ್ :-)
(ವಿ.ಸೂ: ಒಂದೇ ತತ್ತ್ವವನ್ನು ಸಾರುವ ಕಾವ್ಯದ ವಿವಿಧ ರೂಪಗಳನ್ನು ನೋಡಲು ಎಷ್ಟು ಆನಂದವಾಗುತ್ತದೆಯಲ್ಲವೆ? ನನಗಂತೂ ಅರುಣನು ಹತ್ತೇ ನಿಮಿಷದಲ್ಲಿ ಕಳುಹಿಸಿದ ಆ ಕವನವನ್ನು ನೋಡಿ ಬಹಳ ಆನಂದವಾಯಿತು! ಅಷ್ಟು ಸೊಗಸಾಗಿ ತನ್ನತನವನ್ನು ಬಿಡದೆ ಆ ತತ್ತ್ವವನ್ನು ಬರೆದಿದ್ದಾನೆ. ಇದರಲ್ಲಿಯೇ ಅಲ್ಲವೇ ನಿಜವಾದ ಪ್ರತಿಭೆ?)
- ಗಂಡಭೇರುಂಡ
(ಈ ಲೇಖನ http://gandabherunda.blogspot.com/ ನಲ್ಲಿ ಮೊದಲು ಪ್ರಕಟವಾಗಿತ್ತು)